ರತ್ನಗಿರಿ ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಜಿಲ್ಲೆ ಹಾಗೂ ಜಿಲ್ಲೆಯ ಮುಖ್ಯ ಆಡಳಿತ ಕೇಂದ್ರ ನಗರ. ಭಾರತದ ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ತೀರದಲ್ಲಿದೆ. ಜಿಲ್ಲೆಯ ವಿಸ್ತೀರ್ಣ 8249 ಚ ಕಿಮೀ. ಜನಸಂಖ್ಯೆ 15,39,416 (1991).

ಕೊಂಕಣತೀರದಲ್ಲಿ ರಾಜ್ಯದ ಅತ್ಯಂತ ದಕ್ಷಿಣಕ್ಕಿರುವ ಈ ಜಿಲ್ಲೆಯ ಪೂರ್ವಕ್ಕೆ ಪಶ್ಚಿಮಘಟ್ಟ ಶ್ರೇಣಿಯ ಸಹ್ಯಾದ್ರಿ ಬೆಟ್ಟಗಳಿವೆ. ಈ ಬೆಟ್ಟಗಳಲ್ಲಿ ಹೆಚ್ಚುಮಳೆಯಾಗಿ ಬೆಟ್ಟದ ಮೇಲಿಂದ ರಭಸದಿಂದ ಹರಿವ ನೀರಿನ ಜೊತೆ ಭೂಮಿಯ ಮೇಲ್ಮೈಯ ಮಣ್ಣು ಕೊಚ್ಚಿಹೋಗಿ ಮರಳುಮಿಶ್ರಿತ ಗಟ್ಟಿ ಭೂಮಿ ಉಳಿದಿದ್ದು ನದಿಕಣಿವೆಗಳಲ್ಲಿ ಮಾತ್ರ ಫಲವತ್ತಾದ ಭೂಮಿಯಿದ್ದು ಬತ್ತ, ತೆಂಗು ಹೆಚ್ಚಾಗಿ ಬೆಳೆಯುತ್ತಾರೆ. ಜೊತೆಗೆ ವಿವಿಧ ಹಣ್ಣುಗಳು ಮತ್ತು ಗೇರುಬೀಜ ಬೆಳೆಯುವುದುಂಟು. ಕಾಡುಗಳಲ್ಲಿ ಉತ್ತಮವಾದ ತೇಗದ ಮರ ಬೆಳೆಯುತ್ತವೆ. ಸಮುದ್ರ ದಂಡೆಯ ನಗರವಾದ ರತ್ನಗಿರಿ ಮೀನುಗಾರಿಕೆಗೂ ಪ್ರಸಿದ್ಧಿ. ಕಬ್ಬಿಣದ ಅದುರು ಮತ್ತು ಬಾಕ್ಸೈಟ್‍ಗಳ ಗಣಿಗಾರಿಕೆಯಿದ್ದು ರಿದ್ದಿ ಬಂದರಿನಿಂದ ರಫ್ತು ಮಾಡಲಾಗುವುದು. ಇವುಗಳ ಜೊತೆಗೆ ತೆಂಗು, ಉಪ್ಪು, ಮಾವಿನಹಣ್ಣು, ಒಣಮೀನು ಮುಂತಾದವೂ ರಫ್ತಾಗುತ್ತವೆ. ದ್ವಿದಳಧಾನ್ಯಗಳು, ಹತ್ತಿ, ಸಕ್ಕರೆ ಇವು ಮುಖ್ಯ ಆಮದು ವಸ್ತುಗಳಾಗಿವೆ. ಮಾಲ್ವನ್, ಸಾವಂತವಾಡಿ, ಚಿಪ್ಲಾನ್ ಮತ್ತು ವೆಂಗುರ್ಲ ಈ ಜಿಲ್ಲೆಯ ಮುಖ್ಯ ಪಟ್ಟಣಗಳು.

ರತ್ನಗಿರಿ ನಗರ ಜಿಲ್ಲೆಯ ಆಡಳಿತ ಕೇಂದ್ರವಾಗಿ ಪ್ರಾಮುಖ್ಯ ಪಡೆದಿದ್ದು ಮುಂಬಯಿಯ ದಕ್ಷಿಣಕ್ಕೆ 219 ಕಿಮೀ ದೂರದಲ್ಲಿದೆ. ಈ ನಗರ ಪ್ರಥಮವಾಗಿ ಬಿಜಾಪುರ ಸುಲ್ತಾನರ ಕಾಲದಲ್ಲಿ ಆಡಳಿತ ಕೇಂದ್ರಸ್ಥಾನ ಪಡೆಯಿತು. 1731ರಲ್ಲಿ ಸತಾರ ರಾಜ್ಯದ ಆಡಳಿತಕ್ಕೆ ಸೇರಿತು. 1783ರಲ್ಲಿ ಪೇಷ್ವೆಗಳ ಜಿಲ್ಲೆಯ ಮುಖ್ಯ ಕೇಂದ್ರವಾಗಿ 1818ರಲ್ಲಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟು ಜಿಲ್ಲಾ ಆಡಳಿತ ಕೇಂದ್ರವಾಯಿತು.

ರತ್ನಗಿರಿಕೊಲ್ಲಿ ಸು. 3.22 ಕಿಮೀ ಉದ್ದ ಹಾಗೂ ಸು. 1.6 ಕಿಮೀ ಆಳವಾಗಿದೆ. ಇಲ್ಲಿಯ ರತ್ನಗಿರಿನದಿ ಸಹ್ಯಾದ್ರಿ ಶ್ರೇಣಿಗಳಲ್ಲಿನ ಅಂಬಾಕಣಿವೆಯಲ್ಲಿ ಸು. 64 ಕಿಮೀ ದೂರ ಹರಿದು ಪಶ್ಚಿಮಸಮುದ್ರ ಸೇರುತ್ತದೆ. ನದಿಯ ಮುಖಜಭೂಮಿ ತುಂಬ ಇಕ್ಕಟ್ಟಿನದಾಗಿದೆ. ಅದರ ದಕ್ಷಿಣದಲ್ಲಿನ ಮರಳಿನ ದಿನ್ನೆ ರಕ್ಷಣೆಯನ್ನು ನೀಡುತ್ತದೆ. ಪ್ರವೇಶಸ್ಥಳದ ಹತ್ತಿರ ಉತ್ತರದಲ್ಲಿರುವ ಭೂಶಿಖರದ ಮೇಲೆ ರತ್ನಗಿರಿಯ ಜಿಲ್ಲೆ ಇದೆ. ರತ್ನಗಿರಿಯ ಕೊಲ್ಲಿ ಸಣ್ಣಸಣ್ಣ ಹಡಗುಗಳಿಗೆ ಸುರಕ್ಷಿತ ತಂಗುದಾಣವನ್ನು ಒದಗಿಸುತ್ತದೆ. ಕೋಟೆಯ ತುದಿಯಲ್ಲಿ ದೀಪದ ಮನೆ ಇದೆ. ಈ ಕೋಟೆ ಸು. 60-90 ಮೀ. ಎತ್ತರದಲ್ಲಿದ್ದು ವಿಶೇಷವಾಗಿ ಗಂಡಶಿಲೆಗಳಿಂದ ಕೂಡಿದ್ದು ಶಿಲಾಭರಿತವಾಗಿದೆ. ಕೋಟೆಗೋಡೆಗಳಲ್ಲಿ ಅಲ್ಲಲ್ಲಿ ಅನೇಕ ಬುರುಜುಗಳನ್ನು ಕಟ್ಟಿದ್ದಾರೆ. ಇದು ಕುದುರೆಯ ಗೊರಸಿನ ಆಕಾರದಲ್ಲಿದೆ. ಇಲ್ಲಿ ಒಂದು ಸಣ್ಣ ಭೂಸಂಧಿಯೂ ಇದೆ. ಕೋಟೆಯಲ್ಲಿ ಭೂಸಂಧಿಯಿಂದ ಆರಂಭಿಸಿ ಒಳಕೋಟೆಯೊಂದಿದೆ. ಕೋಟೆಯ ಹೆಬ್ಬಾಗಿಲು ಹೊರಕೋಟೆಯಲ್ಲಿದೆ. ಬೆಟ್ಟದ ಪೂರ್ವಶ್ರೇಣಿಯಲ್ಲಿ ಭದ್ರವಾದ ಗೋಡೆಯನ್ನು ಕಟ್ಟಲಾಗಿದೆ. ಕೋಟೆಯ ಹೆಬ್ಬಾಗಿಲಿಗೆ ಆನೆಗಳು ಬಂದು ಹಾಯ್ದು ಬಾಗಿಲು ಮುರಿಯದಂತೆ ಕಬ್ಬಿಣದ ಮೊನಚಾದ ಮೊಳೆಗಳನ್ನು ಕೂಡಿಸಲಾಗಿದೆ. ದುರ್ಗದ ಭದ್ರವಾದ ಭಾಗವೆಂದರೆ ಬಲಖಿಲ್ಲೆ; ಇಲ್ಲಿ ಕೊತ್ತಲಗಳು ಬಹಳ ಒತ್ತೊತ್ತಾಗಿವೆ. ರತ್ನಗಿರಿ ಬಂದರಿನ ಈ ಪ್ರದೇಶಕ್ಕೆ ವಿಶೇಷವಾದ ಭದ್ರತೆಯನ್ನು ಪ್ರತಿನಿಧಿ ಧೋಂಡೋ ಭಾಸ್ಕರ (1790) ಮಾಡಿಸಿದನೆನ್ನುವರು.

ಬಲಖಿಲ್ಲೆ ಸು. 2.42 ಹೆಕ್ಟೇರ್ ವಿಸ್ತೀರ್ಣತೆಯುಳ್ಳದ್ದಾಗಿದೆ. ಹೆಬ್ಬಾಗಿಲನ್ನು ಬಿಟ್ಟರೆ ಈ ಕೋಟೆಯ ಭಾಗ ಒಳಬರಲು ದಾರಿಯನ್ನು ಹೊಂದಿಲ್ಲ. ಕೋಟೆಯ ಒಳಗೆ ಭವಾನಿ ಮಂದಿರವಿದೆ. ಇದಕ್ಕೆ ಹತ್ತಿರದಲ್ಲಿ ಒಂದು ಕೊಳವಿದೆ. ಕೋಟೆಯಲ್ಲಿ ಒಳಗೆ ಹಲವು ಸುರಂಗ ರಹಸ್ಯದಾರಿಗಳೂ ಇವೆ. ಕೋಟೆಯ ಭದ್ರತಾ ವ್ಯವಸ್ಥೆಗಳು ಭಾಗಶಃ ಮುಸಲ್ಮಾನ ದೊರೆಗಳಿಗೂ ಭಾಗಶಃ ಮರಾಠಾ ರಾಜರಿಗೂ ಸಂಬಂಧಿಸಿವೆಯೆಂದು ತಿಳಿದುಬರುತ್ತದೆ. ಈ ಕಾರ್ಯಗಳು ಬಹಮನೀ ರಾಜರಿಂದಲೇ (1343-1500) ಆರಂಭವಾದವೆಂದು ಸ್ಥಳೀಯರ ಹೇಳಿಕೆ. ಬಹಮನೀ ರಾಜರಿಗಿಂತ ಬಿಜಾಪುರದ ಸುಲ್ತಾನರೇ (1500-1660) ಹೆಚ್ಚಾಗಿ ಈ ಕೆಲಸಗಳನ್ನು ಮಾಡಿಸಿದರೆಂದು ಹೇಳಬಹುದು. ಶಿವಾಜಿ ಸು. 1670ರಲ್ಲಿ ಈ ಕೋಟೆಯನ್ನು ಹೆಚ್ಚು ಭದ್ರಪಡಿಸಿದನೆಂದು ತಿಳಿದುಬರುತದೆ. ರತ್ನಗಿರಿ ಸಾಮಾನ್ಯವಾಗಿ ವಂಶಪಾರಂಪರ್ಯ ಅಧಿಕಾರಿಗಳಾದ ದೇಶಮುಖ ಮುಂತಾದವರ ಆಡಳಿತಕ್ಕೆ ಒಳಪಡದೆ ರಾಜಮನೆತನದ ನೇರ ಆಡಳಿತಕ್ಕೆ ಒಳಪಟ್ಟಿತ್ತು. 1731ರಲ್ಲಿ ಕೊಲ್ಲಾಪುರ ಮತ್ತು ಸತಾರ ಜಿಲ್ಲೆಗಳೆಂದು ನಾಡನ್ನು ವಿಭಜಿಸಿದಾಗ ಸತಾರ ದೊರೆ ಸಾಹುವಿಗೆ ರತ್ನಗಿರಿಯನ್ನು ನೀಡಲಾಯಿತು.

ರತ್ನಗಿರಿ ಜಿಲ್ಲೆಯ ಹಾಗೂ ಉಪವಿಭಾಗದ ಮುಖ್ಯಸ್ಥಳವಾದ ಕಾರಣದಿಂದ ಇಲ್ಲಿ ಅನೇಕ ಕಚೇರಿಗಳು, ಅವುಗಳಿಗೆ ಸಂಬಂಧಪಟ್ಟ ಕಟ್ಟಡಗಳು ಅಸ್ತಿತ್ವಕ್ಕೆ ಬಂದವು. ಜನಸಂಖ್ಯೆಯೂ ಹೆಚ್ಚಿತು. ಯೂರೋಪಿಯನ್ನರು, ಆಂಗ್ಲ ಅಧಿಕಾರಿಗಳು ಇಲ್ಲಿ ಬಂದು ನೆಲೆಸಿದರು. ಗಿರಿಶಿಖರದ ಇಳಿಜಾರು ಭೂಮಿಯಲ್ಲಿ ಅನೇಕ ಕಟ್ಟಡಗಳು ತಲೆಯೆತ್ತಿದವು. ಕ್ಯಾಥೋಲಿಕ್ ಕ್ರೈಸ್ತ ಆರಾಧನಾ ಮಂದಿರಗಳು, ಶಾಲಾ ಕಾಲೇಜುಗಳು, ಗೋಖಲೆ ಕಲಾ ಮತ್ತು ವಿಜ್ಞಾನ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು, ಕೈಗಾರಿಕಾ ತರಬೇತಿ ಸಂಸ್ಥೆ, ಸಮುದ್ರ ಜೀವಿ ಸಂಶೋಧನ ಕೇಂದ್ರ ಮುಂತಾದವುಗಳು ಇಲ್ಲಿವೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ